ತುಳಸೀವೈಶಿಷ್ಟ್ಯ - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Top
Pureprayer

ತುಳಸೀವೈಶಿಷ್ಟ್ಯ

ನಮ್ಮ ಸಂಸ್ಕೃತಿಯಲ್ಲಿ ತುಳಸಿಗೆ ಅತ್ಯಂತ ವಿಶಿಷ್ಟ ಹಾಗೂ ಪರಮ ಪವಿತ್ರವಾದ ಸ್ಥಾನವಿದೆ

ನಾವು ಪೂಜಿಸುವ ಎಲ್ಲ ದೇವ-ದೇವತೆಗಳಿಗೂ ತುಳಸಿಯನ್ನು ಅರ್ಪಿಸುತ್ತೇವೆ. ಕರ್ನಾಟಕಸಂಗೀತದ ಪಿತಾಮಹರಾದ ಶ್ರೀ ಪುರಂದರದಾಸರು ತಮ್ಮ ಒಂದು ಕೃತಿಯಲ್ಲಿ ಹೀಗೆ ನುಡಿದಿದ್ದಾರೆ: “ತುಳಸಿ ಇಲ್ಲದ ಪೂಜೆ ಒಲ್ಲನೋ ಹರಿ ಕೊಳ್ಳನೋ.” ವಿಶೇಷವೆಂದರೆ, ತುಳಸಿಯ ಎಲೆ, ದಳ, ತೆನೆ, ಕಾಷ್ಠ ಮತ್ತು ತುಳಸಿ ಗಿಡದ ಬುಡದಲ್ಲಿರುವ ಮಣ್ಣೂ ಕೂಡ ಅತ್ಯಂತ ಪವಿತ್ರವಾದದ್ದೆಂದು ಶಾಸ್ತ್ರಗಳು ಹೇಳುತ್ತವೆ.

ಎಲ್ಲ ವಯಸ್ಸಿನ ಸ್ತ್ರೀಯರ ದೈನಂದಿನ ಕಾರ್ಯಕ್ರಮಗಳಲ್ಲಿ ತುಳಸೀ ಅರ್ಚನೆಗೆ ಪ್ರಮುಖ ಸ್ಥಾನ. ಮನೆಯ ಮುಂದೆ ತುಳಸಿ ಗಿಡವೊಂದನ್ನು ನೆಟ್ಟಿದ್ದರೆ ಭೂತ, ಪ್ರೇತ, ಪಿಶಾಚಾದಿಗಳ ಭಯವಿರುವುದಿಲ್ಲ. ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳಿವೆ. ರೋಗಕಾರಕ ಕ್ರಿಮಿಗಳನ್ನು ತುಳಸಿ ವಿನಾಶಗೊಳಿಸುತ್ತದೆ. ಹೀಗೆ ಅನೇಕ ವಿಧದಲ್ಲಿ ತುಳಸಿಯು ಮಾನ್ಯವಾಗಿದೆ.

ಪೌರಾಣಿಕವಾಗಿ, ದೇವಾಸುರರು ಅಮೃತಪ್ರಾಪ್ತಿಗಾಗೆ ನಡೆಸಿದ ಸಮುದ್ರ ಮಂಥನದ ಸಂದರ್ಭದಲ್ಲಿ ಮಹಾವಿಷ್ಣುವಿನ ಅವತಾರಪುರುಷನಾದ ಶ್ರೀ ಧನ್ವಂತರಿಯು ಪ್ರಕಟಗೊಳ್ಳುವ ಮುನ್ನ ತುಳಸಿಯು ಗೋಚರಿಸಿದಳು ಎಂದು ತಿಳಿದುಬರುತ್ತದೆ. ತುಳಸಿ ಗಿಡದಲ್ಲಿ ದಾಮೋದರರೂಪಿ ಮಹಾವಿಷ್ಣುವಿನ ಸಾನ್ನಿಧ್ಯವಿರುತ್ತದೆ ಎಂದು ಶೃತಿಗಳು ಹೇಳುತ್ತವೆ. ಉತ್ಥಾನ ದ್ವಾದಶಿಯಂದು ತುಳಸಿಯ ಪಕ್ಕದಲ್ಲಿ ನೆಲ್ಲಿಕಾಯಿಗಳನ್ನು ಹೊಂದಿರುವ ನೆಲ್ಲಿ ಟೊಂಗೆಯೊಂದನ್ನು ನೆಟ್ಟು, ಅದರಲ್ಲಿ ದಾಮೋದರ ರೂಪಿ ಪರಮಾತ್ಮನನ್ನು ಆಹ್ವಾನಿಸಿ, ಅರ್ಘ್ಯ-ಪಾದ್ಯಾದಿಗಳಿಂದ ಅರ್ಚಿಸಿ, ಧೂಪ-ದೀಪಗಳಿಂದ ಆರಾಧಿಸಿ, ಸಾಂಕೇತಿಕವಾಗಿ ತುಳಸಿಯೊಂದಿಗೆ ವಿವಾಹವನ್ನು ನೆರವೇರಿಸುವುದು ಸಂಪ್ರದಾಯ. ಆಷಾಢಮಾಸದ ಪ್ರಥಮೈಕಾದಶಿಯಂದು ಯೋಗನಿದ್ರೆಗೆ ಸರಿಯುವ ಪರಮಾತ್ಮನನ್ನು ಶ್ರೀ ಮಹಾಲಕ್ಷ್ಮಿಯು ಕಾರ್ತೀಕ ಶುಕ್ಲ ದ್ವಾದಶಿ ಅಥವಾ ಉತ್ಥಾನ ದ್ವಾದಶಿಯಂದು ಎಚ್ಚರಗೊಳಿಸುತ್ತಾಳೆ. ಉತ್ಥಾನ ಎಂದರೆ ಎಬ್ಬಿಸುವುದೆಂದರ್ಥ. ಆದ್ದರಿಂದಲೇ ಇದನ್ನು ಉತ್ಥಾನ ದ್ವಾದಶಿಯೆಂದು ಕರೆಯಲಾಗುತ್ತದೆ.

ದೇವೀ ಭಾಗವತದ ಪ್ರಕಾರ, ಮಹಾವಿಷ್ಣುವು ಅಸುರನೊಬ್ಬನನ್ನು ಸಂಹರಿಸಿದನು ಮತ್ತು ತುಳಸಿಯನ್ನು ಸಂರಕ್ಷಿಸಿ ವಿವಾಹವಾದನು. ಪರಮಾತ್ಮನು ತುಳಸಿಯಲ್ಲಿ ಸದಾ ಶ್ರೀ ಮಹಾಲಕ್ಷ್ಮಿಯ ಸಾನ್ನಿಧ್ಯವಿರುವಂತೆ ವಿಶೇಷವಾದ ವರವನ್ನೀಯುತ್ತಾನೆ. ತುಳಸಿಯ ಪಕ್ಕದಲ್ಲಿ ಸಾಲಿಗ್ರಾಮವೊಂದನ್ನಿಟ್ಟು ದಾಮೋದರ ರೂಪಿ ಮಹಾವಿಷ್ಣುವನ್ನು ಅದರಲ್ಲಿ ಆಹ್ವಾನಿಸಿ, ಸಾಂಕೇತಿಕವಾಗಿ ತುಳಸಿಯೊಂದಿಗೆ ಆತನ ವಿವಾಹವನ್ನು ನೆರವೇರಿಸುವುದೂ ರೂಢಿಯಲ್ಲಿದೆ. ಸಾಲಿಗ್ರಾಮವಿಲ್ಲದಿದ್ದಾಗ ನೆಲ್ಲಿ ಟೊಂಗೆಯನ್ನು ಇಡಹಬಹುದು.

ದೈನಂದಿನ ತುಳಸಿ ಪೂಜೆ, ಅದರಲ್ಲೂ ವಿಶೇಷವಾಗಿ ಉತ್ಥಾನ ದ್ವಾದಶಿಯಂದು ತುಳಸೀ-ದಾಮೋದರ ವಿವಾಹ ಮಹೋತ್ಸವವನ್ನು ಆಚರಿಸುವುದು, ಸರ್ವ ಪಾಪಪರಿಹಾರಕ, ಸರ್ವವ್ಯಾಧಿ ನಿವಾರಕ, ಪುಣ್ಯಪ್ರದ, ಸುದೀರ್ಘ ಮುತ್ತೈದೆ ಭಾಗ್ಯದಾಯಕ ಮತ್ತು ಅಭಿವೃದ್ಧಿಪ್ರದ.

ಕಾರ್ತಿಕಮಾಸದಲ್ಲಿ ತುಳಸೀದೇವಿಯನ್ನು ಅರ್ಚಿಸುವ ಕ್ರಮ

ಭಗವಂತನನ್ನು ಲಕ್ಷ್ಮೀದೇವಿಯು ಕಾರ್ತಿಕಮಾಸದ ಪಾಡ್ಯಮಿಯಿಂದ ದ್ವಾದಶಿಯವರೆಗೆ ಎಚ್ಚರಗೊಳಿಸುತ್ತಾಳೆಂದು ಹೇಳಲಾಗುತ್ತದೆಯಾದ್ದರಿಂದ, ಈ ದಿನಗಳು ಅತ್ಯಂತ ಪವಿತ್ರ ಮತ್ತು ಭಗವದಾರಾಧನೆಗೆ ಸೂಕ್ತ, ವಿಶೇಷವಾಗಿ ತುಳಸಿ ಆರಾಧನೆಗೆ ಅತ್ಯಂತ ಸೂಕ್ತವೆಂದು ಶಾಸ್ತ್ರಗಳು ಹೇಳುತ್ತವೆ.

ಭಗವಂತನನ್ನು ಆರಾಧಿಸುವಲ್ಲಿ ಭಜನೆ, ನರ್ತನಗಳಿಗೆ ವಿಶೇಷಸ್ಥಾನವಿರುವುದು ಸ್ಮೃತಿ-ಪುರಾಣಗಳಿಂದ ತಿಳಿದುಬರುತ್ತದೆ. ಕಾರ್ತಿಕಮಾಸದ ಶುಕ್ಲಪಕ್ಷ ದ್ವಾದಶಿಯಂದು ತುಳಸಿ-ದಾಮೋದರರ ಅರ್ಚನೆ ಅತ್ಯಂತ ಪುಣ್ಯಪ್ರದ. ಈ ಸಂದರ್ಭದಲ್ಲಿ ತುಳಸೀ ಬೃಂದಾವನವನ್ನು ವಿಶೇಷವಾಗಿ ಅಲಂಕರಿಸಬೇಕು. ತುಳಸೀ ಬೃಂದಾವನದಲ್ಲಿ ಶ್ರೀಕೃಷ್ಣನ ವಿಗ್ರಹವನ್ನಿಡಬೇಕು. ಪೂಜೆಯನ್ನು ನೆರವೇರಿಸಲು ಮಂಗಳದ್ರವ್ಯಗಳಾದ ಅರಿಶಿನ, ಕುಂಕುಮ, ಅಕ್ಷತೆ, ಹೂವು ಮತ್ತು ಪತ್ರೆಗಳನ್ನು ಇಟ್ಟುಕೊಳ್ಳಬೇಕು. ಆಚಮನವನ್ನು ಮಾಡಿ, ಪ್ರಾಣಾಯಾಮದ ನಂತರ, ನಮ್ಮನ್ನು ಸದಾ ರಕ್ಷಿಸುತ್ತಿರುವ ಭಗವಂತನ ಪ್ರೀತ್ಯರ್ಥವಾಗಿ, ಭಗವಂತನ ಅನುಜ್ಞೆಯಂತೆ ತುಳಸಿ-ದಾಮೋದರರ ಆವಾಹನೆ, ಅರ್ಚನೆಗಳನ್ನು ಮಾಡುತ್ತಿರುವುದಾಗಿ ಸಂಕಲ್ಪಿಸಬೇಕು. ಮಂಗಳದ್ರವ್ಯಗಳಿಂದ ತುಳಸಿ-ದಾಮೋದರರನ್ನು ಅರ್ಚಿಸಿ, ಧೂಪ-ದೀಪಗಳಿಂದ ಆರಾಧಿಸಿ, ಹಾಲಿನಲ್ಲಿ ಬೆರೆಸಿದ ಅವಲಕ್ಕಿಯ ನೈವೇದ್ಯಗಳನ್ನು ಸಮರ್ಪಿಸಬೇಕು.

ತುಳಸೀ ನಾಮಗಳ ಸಂಕೀರ್ತನೆ, ತಾಳಸಹಿತ ಭಜನೆ, ನೃತ್ಯಸೇವೆಗಳನ್ನು ಅರ್ಪಿಸಿ ಕೃಷ್ಣಾರ್ಪಣ ಮಾಡುವುದು ಸಂಪ್ರದಾಯ. ವೃದ್ಧದಂಪತಿಗಳಿಗೆ ತುಳಸೀಸಹಿತ ದಾನಗಳನ್ನು ನೀಡಿ ಕೃತಾರ್ಥರಾಗುವುದು ತುಳಸೀ ಅರ್ಚನೆಯ ಅವಿಭಾಜ್ಯ ಅಂಗ. ಭಗವಂತನ ತುಲಾಭಾರದ ಸಂದರ್ಭದಲ್ಲಿ ಒಂದು ತುಳಸೀದಳವೇ ಪರಮಾತ್ಮನನ್ನು ತುಲನೆ ಮಾಡಲು ಶಕ್ತವಾಯಿತು.

ತುಳಸೀದಳವು ಭಗವಂತನನ್ನು ತೃಪ್ತಿಪಡಿಸುವಲ್ಲಿ ಅತ್ಯಂತ ಪ್ರಭಾವಯುಕ್ತ. ಧನಕನಕಗಳಿಂತ ಪರಮಾತ್ಮನಿಗೆ ತುಳಸೀದಳವೇ ಹೆಚ್ಚು ಪ್ರೀತಿಪಾತ್ರವೆಂಬುದು ಸೂಚ್ಯಾರ್ಥ. ಸ್ನಾನವಾದ ನಂತರ ಪಾತ್ರೆಯೊಂದರಲ್ಲಿ ನೀರು ತೆಗೆದುಕೊಂಡು ಕ್ರಮ ಪ್ರಕಾರ ಹೊಸ್ತಿಲು‍ ಪೂಜೆಯನ್ನು ಮುಗಿಸಿ ತುಳಸೀ ವೃಂದಾವನದ ಸನ್ನಿಧಿಗೆ ಬರಬೇಕು. ವೃಂದಾವನವು ಒದ್ದೆಯಾಗುವಂತೆ ಹೊಸ್ತಿಲಿನ ಮೇಲಿಟ್ಟಿದ್ದ ತಂಬಿಗೆಯಿಂದ ನೀರೆರೆದು, ತುಳಸೀ ಮೂಲದಲ್ಲಿ ಇರುವ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು, ತುಳಸೀ ಮೂಲಮೃತ್ತಿಕೆಯಿಂದ ಹಣೆಯಲ್ಲಿ ಊರ್ಧ್ವಪುಂಡ್ರವನ್ನು ಧರಿಸಿ, ಪ್ರದಕ್ಷಿಣೆ ಬಂದು ನಮಸ್ಕರಿಸಬೇಕು. ಈ ಸಮಯದಲ್ಲಿ ತುಳಸೀ ಮಹತ್ವವನ್ನು ತಿಳಿಸುವ ಶ್ಲೋಕಗಳನ್ನು ಹೇಳಿಕೊಳ್ಳಬೇಕು.

|| ಪಾಪಾನಿ ಯಾನಿ ರವಿಸೂನುಪಟಸ್ಥಿತಾನಿ ಗೋಬ್ರಹ್ಮಬಾಲಾಪಿತೃಮಾತೃ ವಧಾದಿಕಾನಿ |

| ನಶ್ಯಂತಿ ತಾನಿ ತುಳಸೀವನದರ್ಶನೇನ ಗೋಕೋಟಿದಾನ ಸದೃಶಂ ಫಲಮಾಪ್ನುವಂತಿ ||1||

ತುಳಸೀವೃಂದಾವನವನ್ನು ದರ್ಶನ ಮಾಡುವುದರಿಂದ ಕೋಟಿ ಗೋವುಗಳನ್ನು ದಾನವಿತ್ತ ಫಲ ಲಭಿಸುತ್ತದೆ. ರವಿಸುತನಾದ ಯಮನ (ಚಿತ್ರಗುಪ್ತನ) ಬರೆಯುವ ಬಟ್ಟೆಯಲ್ಲಿ ಉಲ್ಲೇಖಿಸಿರುವ ಗೋಹತ್ಯೆ, ಬ್ರಹ್ಮಹತ್ಯೆ,ಬಾಲಹತ್ಯೆ, ಮಾತೃವಧ, ಪಿತೃವಧೆಯಂತಹ ಪಾತಕಗಳು ತುಳಸೀವೃಂದಾವನ ದರ್ಶನದಿಂದ ನಾಶವಾಗುತ್ತವೆ.

|| ಲಲಾಟೇ ಯಸ್ಯ ದೃಶ್ಯೇತ ತುಳಸೀಮೂಲಮೃತ್ತಿಕಾ |

| ಯಮಸ್ತಂ ನೇಕ್ಷಿತುಂ ಶಕ್ತಃ ಕಿಮು ದೂತಾ ಭಯಂಕರಾಃ ||2||

ತುಳಸೀಗಿಡದ ಬುಡದಲ್ಲಿರುವ ಮೃತ್ತಿಕೆಯನ್ನು ಹಣೆಯಲ್ಲಿ ಧರಿಸಿದವರ ಮುಖವನ್ನು ಯಮನೇ ಕತ್ತೆತ್ತಿ ನೋಡಲಾಗದು. ಇನ್ನು ಯಮನ ದೂತರು ನೋಡಬಲ್ಲರೇ? ತುಳಸೀ ಮೃತ್ತಿಕೆಯ ಧಾರಣೆಯಿಂದ ಅಪಮೃತ್ಯುವಿರುವುದಿಲ್ಲ.

|| ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ |

| ವಾಸುದೇವಾದಯೋ ದೇವಾಃ ವಸಂತಿ ತುಳಸೀವನೇ ||3||

ತುಳಸೀಮೂಲದಲ್ಲಿಯ ಜಲವನ್ನು ಪ್ರೋಕ್ಷಿಸಿಕೊಳ್ಳಬೇಕು. ತುಳಸೀವನದಲ್ಲಿ (ಬೃಂದಾವನದಲ್ಲಿ) ಪುಷ್ಕರಾದಿ ಸರೋವರ ತೀರ್ಥಗಳು, ಗಂಗೆಯೇ ಮೊದಲಾದ ನದಿತೀರ್ಥಗಳು, ವಾಸುದೇವಾದಿ ದೇವತೆಗಳೆಲ್ಲಾ ನೆಲೆಸಿರುತ್ತಾರೆ.

|| ತುಳಸೀ ಕಾನನಂ ಯತ್ರ ಯತ್ರ ಪದ್ಮವನಾನಿ ಚ |

| ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ ||4||

ತುಳಸೀ ಕಾನನವೇ ಒಂದು ಪುಣ್ಯಕ್ಷೇತ್ರ. ತುಳಸೀವನ, ಪದ್ಮಸಮುದಾಯ, ವೈಷ್ಣವವಾಸ ಇವುಗಳಿರುವ ಪ್ರದೇಶದಲ್ಲಿ ಶ್ರೀಹರಿಯು ನಿತ್ಯಸನ್ನಿಧಾನವಿರುತ್ತದೆ.

|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |

|| ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಮ್ ||5||

ತುಳಸಿಯ ಬುಡದಲ್ಲಿ ಗಂಗಾದಿ ಸರ್ವತೀರ್ಥಗಳು. ಮಧ್ಯದಲ್ಲಿ ವಿಷ್ಣುವೇ ಮೊದಲಾದ ಎಲ್ಲಾ ಸರ್ವದೇವತೆಗಳು. ತುದಿಯಲ್ಲಿ ಋಗ್ವಾದಿ ಸರ್ವವೇದಗಳು. ಸಾಟಿಯಿಲ್ಲದ ತುಳಸಿ ದೇವಿಯೇ, ನಿನಗೆ ನನ್ನ ನಮಸ್ಕಾರಗಳು. ಪಾಲ್ಗಡಲನ್ನು ಕಡೆದಾಗ ಭಗವಂತ ಧನ್ವಂತರಿಯ ಆನಂದಾಶ್ರುವಿನಿಂದ ಅಮೃತ ಕಲಶದಲ್ಲಿ ಆವಿರ್ಭವಿಸಿದ ಹರಿಪ್ರಿಯಳಾದ ಓ ದೇವಿ ತುಳಸಿ! ನಾನು ನಿನಗೆ ನಮಿಸುತ್ತೇನೆ.

| | ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೇ |

| ಕ್ಷೀರೋದಮಥನೋದ್ಭೂತೇ ತುಳಸೀ ತ್ವಾಂ ನಮಾಮ್ಯಹಮ್ ||6||

ಪಾಲ್ಗಡಲನ್ನು ಕಡೆದಾಗ ಭಗವಂತ ಧನ್ವಂತರಿಯ ಆನಂದಾಶ್ರುವಿನಿಂದ ಅಮೃತ ಕಲಶದಲ್ಲಿ ಆವಿರ್ಭವಿಸಿದ ಹರಿಪ್ರಿಯಳಾದ ಓ ದೇವಿ ತುಳಸಿ! ನಾನು ನಿನಗೆ ನಮಿಸುತ್ತೇನೆ.

ಲಕ್ಷ್ಮೀಸಖಿ, ಪರಮಮಂಗಲೇ, ಪಾಪಹಾರಿಣಿ, ಪುಣ್ಯದಾಯಿನಿ, ನಾರದಸ್ತುತೇ, ನಾರಾಯಣಮನಪ್ರಿಯೇ ತುಳಸಿ ನಿನಗೆ ನಮನ.

| | ಯಾ ದೃಷ್ಟ್ವಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃಪಾವನೀ |

| ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾsoತಕತ್ರಾಸಿನೀ | |

|| ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ |

| ನ್ಯಸ್ತಾ ತಶ್ಚರಣೇ ವಿಮುಕ್ತಿಫಲದಾ ತಸ್ಯೈ ತುಳಸ್ಯೈ ನಮಃ | |7 | |

ತುಳಸಿಯನ್ನು ನೋಡಿದೊಡನೆ ಸಕಲಪಾಪಗಳು ನಾಶವಾಗುತ್ತವೆ. ಮುಟ್ಟಿದೊಡೆ ದೇಹ ಪಾವನವಾಗುತ್ತದೆ. ನಮಿಸಿದೊಡನೆ ಪಾಪ ನಿರಸನ ಹೊಂದುತ್ತದೆ . ಎರೆದೊಡನೆ ಮೃತ್ಯುತ್ರಾಸನ ದೂರವಾಗುತ್ತದೆ. ನೆಟ್ಟೊಡನೆ ಶ್ರೀಕೃಷ್ಣನ ಮೇಲೆ ಭಕ್ತಿ ಭಾವ ವೃದ್ಧಿಯಾಗುತ್ತದೆ. ಕೃಷ್ಣನ ಪಾದದಲ್ಲಿ ಸಮರ್ಪಿಸಿದೊಡನೆ ಮೋಕ್ಷ ದೊರೆಯುತ್ತದೆ. ಇಂತಹ ಮಹಿಮೆಯುಳ್ಳ ಶ್ರೀ ದೇವಿ ತುಳಸಿ! ನಾನು ನಿನಗೆ ನಮಿಸುತ್ತೇನೆ.

| | ತುಳಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |

| ನಮಸ್ತೇ ನಾರದನುತೇ ನಾರಾಯಣ ಮನಃಪ್ರಿಯೇ | |8 | |

ಶ್ರೀ ಲಕ್ಷ್ಮಿಸಖಿಯಾದ, ಪಾಪಗಳನ್ನು ಪರಿಹರಿಸುವ, ಪುಣ್ಯವನ್ನು ನೀಡುವ, ನಾರದ ಮಹರ್ಷಿಯ ಸುತೆಯಾಗಿರುವ ಮತ್ತು ಶ್ರೀಮನ್ನಾರಾಯಣನ ಮನಸ್ಸಿಗೆ ಹತ್ತಿರವಿರುವ ತುಳಸೀ ದೇವಿಯೇ, ನಿನಗೆ ಪ್ರಣಾಮಗಳು.

1 Star2 Stars3 Stars4 Stars5 Stars (No Ratings Yet)
Loading...

Review