Datta Jayanthi | ದತ್ತ ಜಯಂತಿ

Datta Jayanthi by Sri Umesh Gautham Nayak

ಶ್ರೀಮನ್ಮಹಾವಿಷ್ಣುವು ಲೋಕೋದ್ಧಾರಕ್ಕಾಗಿ ತಳೆದ ನಾನಾ ರೂಪಗಳಲ್ಲೇ ವಿಶಿಷ್ಟವಾದ ರೂಪ #ಅತ್ರಿ#ಅನಸೂಯಾಸುತ #ಶ್ರೀ #ದತ್ತಾತ್ರೇಯ ರೂಪ. ಅವಧೂತ ದಿಗಂಬರ ಎಂಬೆಲ್ಲ ನಾಮಗಳಿಂದ ಶುದ್ಧಬ್ರಹ್ಮ ಚಿಂತಕ ಸಾಧಕ ಭಕ್ತರ ಆರಾಧ್ಯ ದೈವವಾಗಿ, ನಂಬಿದವರ ಒಳಹೊರಗಲ್ಲಿ ಸದಾ ಜ್ಞಾನಚಕ್ಷುವಾಗಿ, ರಕ್ಷಕನಾಗಿ ಸ್ಥಿತನಾದ ದೇವದೇವನೇ ಶ್ರೀ ಗುರುದೇವದತ್ತ.

‘ದತ್ತ’ ಎಂದರೆ ಕೊಡಲ್ಪಟ್ಟ ಎಂದರ್ಥ. ಯಾರಿಗೆ ಹುಟ್ಟುವಾಗಲೇ ಬೇಕಾದದ್ದು ನೀಡಲ್ಪಟ್ಟಿದೆಯೋ ಆತನು ದತ್ತ. ಅಂದರೆ ‘ನಾನು ಮುಕ್ತನು, ನಾನು ಆತ್ಮನು, ನಾನು ಬ್ರಹ್ಮನೇ ಆಗಿದ್ದೇನೆ’ ಎಂಬ ನಿರ್ಗುಣಾನುಭೂತಿಯನ್ನು ಹುಟ್ಟಿನಿಂದಲೇ ಪಡೆದವನು ದತ್ತ.

ದತ್ತಾತ್ರೇಯನಿಗೆ ‘ಅವಧೂತ’ ದಿಗಂಬರ ಎಂಬ ಹೆಸರುಗಳೂ ಇವೆ.‘#ಅವಧೂತ’ ಎಂದರೆ ವರ್ಣಾಶ್ರಮ ಧರ್ಮಗಳನ್ನು ತ್ಯಜಿಸಿ ಇಲ್ಲಿದ್ದೂ ಪರಮಾತ್ಮನ ಸಾಂಗತ್ಯವನ್ನನುಭವಿಸುವ ಯೋಗಿ. ಆತ್ಮರೂಪದ ಆತನಿಗೆ ಜರಾಮರಣಗಳ ಸೋಂಕಿರದು.

ಶ್ರೀಮದ್ಭಾಗವತದ 11ನೆಯ ಸ್ಕಂದದ 7ನೆಯ ಅಧ್ಯಾಯದಲ್ಲಿ ಯದುರಾಜನು “ಯಾವುದೇ ಕರ್ಮಗಳನ್ನೂ ಮಾಡದೆಯೂ ಇಂತಹ ಮಹಾಬುದ್ಧಿಯನ್ನು ಪಡೆದಿರಿ. ಆ ಬುದ್ಧಿಶಕ್ತಿಯಿಂದ ಮಹಾಜ್ಞಾನವನ್ನು ಪಡೆದವರಾಗಿಯೂ ಬಾಲಕನಂತೆ ಸಂಚರಿಸುವಿರಲ್ಲ? #ಧರ್ಮ ಅರ್ಥ ಕಾಮಗಳ ಸೋಂಕಿಲ್ಲದ, ಮಾನವಸಹಜವಾದ ಯಾವುದೇ ಬಂಧಗಳಿಲ್ಲದ, ಸುಂದರ ಶರೀರಿಯಾಗಿದ್ದೂ ಪ್ರಾಪಂಚಿಕವಾದ ಯಾವುದೇ ಆಸಕ್ತಿಗಳಿಲ್ಲದ, ಹೇಗಿರುವಿರೋ ಹಾಗೆಯೇ ಇದ್ದು ಸದಾ ಪರಮಾನಂದದಲ್ಲಿ ಲೀನವಾಗಿರುವ ಈ ಸಿದ್ಧಿ ತಮಗೆ ಹೇಗೆ ಬಂತು?” ಎಂದು ಸುಂದರಶರೀರಿ ಬಾಲಕರೂಪದಲ್ಲಿ ಅಲೆದಾಡುತ್ತಿದ್ದ ಶ್ರೀಗುರುದೇವದತ್ತನಲ್ಲಿ ಪ್ರಶ್ನಿಸುತ್ತಾನೆ. ಯಾವುದೇ ವಸ್ತ್ರಾದಿಗಳನ್ನು ತೊಡದ ಆ ರೂಪವನ್ನೇ ‘ದಿಗಂಬರ’ ಎಂದರೆ ದಿಕ್ಕುಗಳನ್ನೇ ಅಂಬರ(ಬಟ್ಟೆ)ವಾಗುಳ್ಳವನು ಎಂಬರ್ಥದಲ್ಲಿ ಕರೆಯಲಾಗುತ್ತದೆ. ದಿಗಂಬರ ಎಂದರೆ ಸರ್ವವ್ಯಾಪಿ ಎಂದೂ ಭಾವಿಸಬಹುದು.

ಶ್ರೀಗುರುದೇವ ದತ್ತನ ಹೆಸರು ‘ದತ್ತಾತ್ರೇಯ’ ಎಂದಾಗಲು ಕಾರಣ ಅವನ ಹುಟ್ಟಿನ ಕುರಿತಾದ ಕಥೆ. ಮಹರ್ಷಿ ಅತ್ರಿಗಳ ಸತಿ ಅನಸೂಯಾ ಮಹಾ ಪತಿವ್ರತೆ. ಆಕೆಯ ಪಾತಿವ್ರತ್ಯದ ಮಹಾತ್ಮೆಯನ್ನು ಲೋಕಕ್ಕೆ ತಿಳಿಸಲೋಸುಗವೋ ಎಂಬಂತೆ ತ್ರಿಮೂರ್ತಿಗಳು ಆಕೆಯೋರ್ವಳೇ ಆಶ್ರಮದಲ್ಲಿರುವಾಗ ಅತಿಥಿಗಳಂತೆ ಬಂದು ಇಚ್ಛಾಭೋಜನ ಬೇಕೆನ್ನುತ್ತಾರೆ. ಒಪ್ಪಿದ ಅನಸೂಯೆಯಲ್ಲಿ ವಿವಸ್ತ್ರಳಾಗಿ ಬಡಿಸಬೇಕೆಂಬ ಕೋರಿಕೆ ಸಲ್ಲಿಸಿದಾಗ ಆತಿಥ್ಯವನ್ನು ತಿರಸ್ಕರಿಸಲಾಗದ ಅನಸೂಯೆ ತನ್ನ ಶಕ್ತಿಯಿಂದ ಅವರು ಮೂವರನ್ನೂ ಶಿಶುಗಳಾಗಿಸಿ ಹಸಿವಿನಿಂದ ಅಳುವ ಆ ಶಿಶುಗಳಿಗೆ ಹಾಲೂಡಿಸುತ್ತಾಳೆ. ಬಂದ ಅತ್ರಿ ಮಹರ್ಷಿಗಳಿಗೆ ನಡೆದುದೆಲ್ಲ ತಿಳಿದು, ಹರ್ಷಿತರಾಗುತ್ತಾರೆ. ಪ್ರತ್ಯಕ್ಷರಾದ ತ್ರಿಮೂರ್ತಿಗಳು ವರ ಬೇಡಿರೆಂದಾಗ ಶಿಶುಗಳ ರೂಪದಲ್ಲಿ ನಮ್ಮಲ್ಲೇ ನೆಲೆಸಬೇಕೆಂಬ ಬೇಡಿಕೆ ಮುನಿಗಳಿಂದ. ಬ್ರಹ್ಮನ ಅಂಶದ ಚಂದ್ರ, ವಿಷ್ಣುವಿನ ಅಂಶದ ದತ್ತ ಹಾಗೂ ಶಿವನ ಅಂಶದ ದೂರ್ವಾಸರು ಅತ್ರಿ-ಅನಸೂಯಾಸುತರಾದರು. ಚಂದ್ರನು ಚಂದ್ರಲೋಕಕ್ಕೂ ದೂರ್ವಾಸನು ತೀರ್ಥಕ್ಷೇತ್ರಗಳಿಗೂ ತಪಗೈಯಲು ಅನುಮತಿ ಕೇಳಿ ತೆರಳಿದರೆ ತ್ರಿಮೂರ್ತಿರೂಪನಾಗಿ ದತ್ತ ಅತ್ರಿ-ಅನಸೂಯೆರೊಂದಿಗೆ ಉಳಿದ. ಹೀಗಾಗಿ ತ್ರಿಮೂರ್ತಿರೂಪ ದತ್ತಾತ್ರೇಯನಾದ.

ಗುರೂಪದೇಶವಿಲ್ಲದೆ ಯಾವ ವ್ಯಕ್ತಿಯೂ ಜ್ಞಾನಿಯಾಗಲಾರ. ಭಗವಂತನ ಅಸ್ತಿತ್ವವನ್ನು ತಿಳಿಸಿಕೊಡುವವನೇ ಗುರು ಎಂದು ಧರ್ಮ-ಶಾಸ್ತ್ರಗ್ರಂಥಗಳು ಹೇಳುತ್ತವೆ. ಗುರು ದತ್ತಾತ್ರೇಯರ ಗುರು ಯಾರು? ಇಂತಹ ಅವಧೂತರಿಗೆ ದಿವ್ಯಜ್ಞಾನ ಬಂದುದೆಲ್ಲಿಂದ ಎನ್ನುವುದನ್ನು ಚಿಂತನ ಮಂಥನ ಮಾಡಿದರೆ ಮೋಕ್ಷವೆಂಬ ಪರಮಪದದ ಪ್ರಾಪ್ತಿಗೆ ಬೇಕಾದ ದಿವ್ಯಜ್ಞಾನವು ಪಂಚಭೂತಾತ್ಮಕವಾದ ಈ ಪ್ರಕೃತಿಯಿಂದಲೇ ಸಿಗುತ್ತದೆ ಎಂಬ ದಿವ್ಯ ಸತ್ಯವು ಕಣ್ಣಿಗೆ ಕಾಣುತ್ತದೆ.

ತನ್ನಲ್ಲಿರುವ ಪರಮಜ್ಞಾನದ ಕುರಿತಾಗಿ ಪ್ರಶ್ನಿಸಿದ ಯದುರಾಜನಿಗೆ ಗುರುದತ್ತದೇವನು ಹೇಳುತ್ತಾನೆ “ರಾಜನೇ, ನಾನು ಭೂಮಿಯಿಂದ ಪರೋಪಕಾರ, ವಾಯುವಿನಿಂದ ನಿಸ್ಸಂಗತ್ವ, ಆಕಾಶದಿಂದ ನಿರ್ಲಿಪ್ತತೆ, ಜಲದಿಂದ ಪಾವಿತ್ರ್ಯ ಹಾಗೂ ಸರ್ವಪ್ರಿಯತೆ, ಅಗ್ನಿಯಿಂದ ಮಿಥ್ಯಾಜಗತ್ತಿನಲ್ಲಿ ಸತ್ಯದಂತಿರುವ ಆತ್ಮರೂಪ, ಚಂದ್ರನಿಂದ ವೃದ್ಧಿ-ಕ್ಷಯಗಳಿದ್ದರೂ ಕಾದುಕೊಂಡು ಬರುವ ನಿರಂತರತೆ, ಸೂರ್ಯನಿಂದ ಆತ್ಮವು ನಾನಾರೂಪದಲ್ಲಿದ್ದರೂ ಒಂದೇ ಎಂಬ ಅರಿವನ್ನು ಪಡೆದೆ. ವ್ಯಾಮೋಹದ ಬಲೆಗೆ ಮನುಜ ಸಿಕ್ಕಿ ಸಾಯುವನೆಂಬ

ಸತ್ಯವನ್ನು ಪಾರಿವಾಳದಿಂದಲೂ, ಯೋಗಿಯು ನಾಲಗೆಯ ದಾಸನಾಗದೆ ದೊರೆತುದನ್ನು ತಿಂದು ಜೀವನಸಾಗಿಸಬೇಕು ಎಂಬುದನ್ನು ಹೆಬ್ಬಾವಿನಿಂದಲೂ ಅರಿತೆ. ವಿಶಾಲ, ಪ್ರಶಾಂತ ಮನಸ್ಥಿತಿಯನ್ನು ಸಮುದ್ರದಿಂದಲೂ, ವಿಷಯಾಸಕ್ತಿಯ ಮಾಯೆಯಲ್ಲಿ ಮಾನವ ಬಿದ್ದು ಸುಟ್ಟುಹೋಗುವನೆಂಬ ಸತ್ಯವನ್ನು ಬೆಂಕಿಯಲ್ಲಿ ಬೀಳುವ ಪತಂಗದಿಂದಲೂ, ಭೌತಿಕ ವಸ್ತುಗಳ ಸಂಗ್ರಹದಿಂದಲೇ ನಾಶ ಎಂಬ ಸತ್ಯವನ್ನು ಜೇನುನೊಣದಿಂದಲೂ, ಸ್ತ್ರೀ ವ್ಯಾಮೋಹವು ಸಾಧಕನ ಅಂತ್ಯಕ್ಕೆ ಕಾರಣ ಎಂಬ ಅರಿವನ್ನು ಹೆಣ್ಣಾನೆಯ ಸೆಳೆತದಿಂದ ಖೆಡ್ಡಕ್ಕೆ ಬೀಳುವ ಆನೆಯಿಂದಲೂ, ಕೂಡಿಟ್ಟದ್ದನ್ನು ಯಾರೋ ಕದಿಯುವರೆಂಬ ಪಾಠವನ್ನು ಜೇನು ತೆಗೆಯುವವನಿಂದಲೂ, ವಿಷಯ ಸಂಬಂಧಿ ಗೀತೆಗಳನ್ನು ಯೋಗಿಯು ಆಲಿಸಬಾರದು ಎಂಬ ಅರಿವನ್ನು ಬೇಡನ ಹಾಡಿಗೆ ಮರುಳಾಗಿ ಜೀವ ತೊರೆವ ಜಿಂಕೆಯಿಂದಲೂ ಕಲಿತೆ. ನಾಲಗೆಯ ಚಪಲವನ್ನು ಜಯಿಸಬೇಕು ಎಂಬ ಅರಿವನ್ನು ಗಾಳಕ್ಕೆ ಸಿಲುಕಿದ ಮೀನಿನಿಂದಲೂ, ವಿಟರಿಗಾಗಿ ಕಾದು ಕಾದು ಬೇಸತ್ತು ವೈರಾಗ್ಯ ಹೊಂದಿ ಭಗವಂತನ ಸಾಂಗತ್ಯವೇ ಪರಮಸುಖ ಎಂದರಿತು ಬಾಳಿದ ಪಿಂಗಳಾ ಎಂಬ ವೇಶ್ಯೆಯಿಂದ ಕಾಮವಾಂಛೆ ತೊರೆದು ಭಗವತ್ಪ್ರೀತಿಯನ್ನು ಪಡೆವ ಮಾರ್ಗದ ಅರಿವನ್ನೂ, ಮಾಂಸದ ತುಂಡನ್ನು ಕಚ್ಚಿಕೊಂಡು ಹಾರುವ ಕುರರಪಕ್ಷಿ(ಕಡಲ ಹದ್ದು)ಯನ್ನು ನೋಡಿ ಇತರರಿಗೆ ಆಸೆ ಹುಟ್ಟಿಸುವ ವಸ್ತುವನ್ನು ಹೊಂದಿರುವುದು ಅಪಾಯಕಾರಿ ಎಂಬುದನ್ನೂ ತಿಳಿದೆ. ತನ್ನಷ್ಟಕ್ಕೆ ತಾನು ಆನಂದದಿಂದಿರುವ ಮಗುವಿನಿಂದ ಪರಮಾನಂದಪ್ರಾಪ್ತಿಯ ಸ್ಥಿತಿಯನ್ನೂ, ಭತ್ತ ಕುಟ್ಟುತ್ತಾ ಸದ್ದು ಮಾಡುತ್ತಿದ್ದ ಬಳೆಗಳನ್ನು ಒಂದೊಂದಾಗಿ ಒಡೆದು ಹಾಕಿ ನಿಶ್ಶಬ್ದತೆಯನ್ನು ಪಡೆದ ಹುಡುಗಿ (ಕುಮಾರೀ) ಯಿಂದ ಏಕಾಂಗಿಯಾದರೆ ಶಾಂತಿಯೆಂಬ ಸತ್ಯವನ್ನೂ, ತನ್ನ ಬಳಿಯಲ್ಲಿಯೇ ಅದ್ದೂರಿಯಾಗಿ ಹಾದು ಹೋದ ರಾಜನ ಮೆರವಣಿಗೆಯನ್ನು ಗಮನಿಸದೆ ಬಾಣ ತಯಾರಿಸುವುದರಲ್ಲಿಯೇ ಮಗ್ನನಾದವನಿಂದ ಯೋಗದ ಚಿತ್ತೈಕಾಗ್ರ್ಯವನ್ನೂ, ಯೋಗಿಯು ಮಿತಭಾಷಿಯಾಗಿದ್ದು, ಎಚ್ಚರದಿಂದಿದ್ದು, ಏಕಾಕಿಯಾಗಿರಬೇಕು ಎಂಬುದನ್ನು ಸರ್ಪದಿಂದಲೂ, ಸೃಷ್ಟಿ ಸ್ಥಿತಿ ಲಯರೂಪೀ ಭಗವಂತನನ್ನು ಜೇಡರಹುಳುವಿನ ಜೀವನದಿಂದಲೂ, ಯಾವುದೋ ಹುಳುವನ್ನು ತಂದು ಗೂಡಿನಲ್ಲಿಟ್ಟು ನೋಡುತ್ತ ನೋಡುತ್ತ ತನ್ನದೇ ರೂಪವೀವ ಭೃಂಗೀ(ಕಣಜದ ಹುಳು)ಯಿಂದ ಎಲ್ಲೆಡೆಯೂ ಪರಮಾತ್ಮನನ್ನೇ ಕಾಣುವ ದೃಷ್ಟಿಯನ್ನೂ ಪಡೆದುದರಿಂದ ನನ್ನ ಈ ನಿರ್ಲಿಪ್ತ ಸದಾನಂದರತ ಅವಧೂತತ್ವ ಪ್ರಾಪ್ತಿಗೆ ಇವರೇ ಇಪ್ಪತ್ನಾಲ್ಕು ಮಂದಿ ಗುರುಗಳಾದರು”

ಯದುರಾಜನಲ್ಲಿ ಶ್ರೀಗುರುದತ್ತನು ಹೇಳುವ ಈ ನುಡಿಯಲ್ಲಿ ದತ್ತ ತತ್ತ್ವವೆನ್ನುವುದು ವಿಶ್ವಮಾನ್ಯವಾಗಿ ನಿಲ್ಲುವಂತಹದು ಎಂಬ ಸತ್ಯ ನಮಗೆ ಹೊಳೆಯುತ್ತದೆ.

ಮಾರ್ಗಶಿರ ಪೌರ್ಣಮಿಯು ದತ್ತಜನ್ಮದಿನ. ದತ್ತಜಯಂತಿಯ ಆಚರಣೆ ಬಹು ವ್ಯಾಪಕ. ಚಿಕ್ಕಮಗಳೂರಿನ ದತ್ತಪೀಠ, ಮಹಾರಾಷ್ಟ್ರ, ಗಾಣಗಾಪುರ ಹಾಗೂ ತಮಿಳುನಾಡಿನ ಹಲವೆಡೆಗಳಲ್ಲಿ ದತ್ತಜಯಂತಿಯ ಆಚರಣೆ ವಿಜೃಂಭಣೆ ಹಾಗೂ ಭಕ್ತಿಪೂರ್ವಕ ನಡೆಯುತ್ತದೆ. ಕೆಲವರು ದತ್ತನವರಾತ್ರಿಯನ್ನೂ ಆಚರಿಸುತ್ತಾರೆ. ದತ್ತಾತ್ರೇಯ ದೇಗುಲಗಳಲ್ಲೆಲ್ಲ ಭಕ್ತರ ಸಂದಣಿಯಿರುತ್ತದೆ. ದತ್ತಜಯಂತಿಯು ನಮಗೆಲ್ಲ ಶ್ರೀಗುರುದೇವ ದತ್ತಾತ್ರೇಯನ ಕರುಣೆಯನ್ನು ದೊರಕಿಸಿ ಸಮೃದ್ಧಿ ನೆಮ್ಮದಿ ನೀಡುವಂತಾಗಲಿ.

#Hithavadhana / #ಹಿತಾವಧಾನ :

By – #Ashtavadhani #Umesh #Goutham #Nayak



Please visit www.pureprayer.com for all your needs for Pujas-Homas-Pariharas, SpiRitual journeys and many more Hindu Religious Services.